Saturday 5 January 2013

ಬ್ಲಾಗ್ ಓದೋ ಮುನ್ನ ನನ್ನ ಬಗ್ಗೆ ಎರಡು ಮಾತು...

ಶಾಲೆ ಹಾಕಿತು ಜೀವನಕ್ಕೆ ಭದ್ರ ಬುನಾದಿ...

ಮೊದಲಿನಿಂದಲು ಹೆಚ್ಚು ಮಾತನಾಡಲು ಬಯಸದ ನಾನು, ಯಾವುದೇ ಕೆಲಸವಾಗಲಿ ಅದರಲ್ಲೇ ಸಮಯ ಕಳೆಯಲು ಹೆಚ್ಚು ಇಷ್ಟ ಪಡುತ್ತಿದ್ದೆ. ಅಮ್ಮ ಯಾವಾಗ್ಲೂ ಅಂತಿರ್ತಾರೆ 'ಸಣ್ಣದಿದ್ದಗಿಂದ ಬರಿ ಕೆಲಸ ಮಾಡ್ಕೊಂತ ಬಂದಾಳ. ಆಡಲಿಕ್ಕೆ ಹೊರಗ ಹೋಗೆ ಇಲ್ಲ ಅಂತ' ಅಂತಿರ್ತಾರ. ( ಕ್ಷಮಿಸಿ ಮೂರನೇ ತರಗತಿಯಲ್ಲಿದ್ದಾಗಲೇ ಬೆಂಗಳೂರಿಗೆ ಬಂದೆ. ಆದ್ದರಿಂದ, ಎರಡೂ ಕನ್ನಡವನ್ನು   ಒಟ್ಟಾಗಿ ಮಾತಾಡ್ತೀನಿ). ಅದ್ಯಾಕೊ ಗೊತ್ತಿಲ್ಲ. ನನಗೆ ಸ್ನೇಹಿತರು, ಹೊರಗ್ ಸುತ್ತೋದು, ಸಿನಿಮಾ ನೋಡೋದಂದ್ರೆ ಅಷ್ಟು ಪ್ರಿಯವಾದ ವಿಷಯ ಅಲ್ಲ.
ಸಣ್ಣವಳಿದ್ದಾಗ  ಮುಂದೆ ನಾನು ಏನಾಗಬೇಕೆಂಬ ಬಗ್ಗೆ ಯಾವುದೇ ಕನಸುಗಳಿರಲಿಲ್ಲ. ಆದರೆ ಶಾಲೆಯಲ್ಲಿ ಕಲಿಸುತ್ತಿದ್ದ ಪ್ರತಿ ಪಾಠವನ್ನು ತುಂಬಾ ಸೊಗಸಾಗಿ  imagin  ಮಾಡ್ಕೊತಿದ್ದೆ. ಟಿಚರ್ರು ಪಾಠ ಮಾಡ್ತಿದ್ರೆ, ನಾನು ಅವ್ರು ಹೇಳುತ್ತಿದ್ದ ಪ್ರತಿ ವಾಕ್ಯಕ್ಕೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನ, ಗೊತ್ತಿರ್ತಿರೋ ಜನಗಳನ್ನ ಬಳಸಿಕೊಂಡು ಕಲ್ಪಿಸಿಕೊಳ್ಳುತ್ತಿದ್ದೆ. ಶಾಲಾ ದಿನಗಳಲ್ಲಿ ನನಗದು ಸುಂದರ ಅನುಭವ.
 ಐದನೇ ತರಗತಿಗೆ ಬಂದಾಗ ನಾನು ಓದುತ್ತಿದ್ದ ಶಾಲೆಯಲ್ಲಿದ್ದ ನೀಲವೇಣಿ ಅನ್ನೋ ಮಿಸ್ಸು ಇಂಗ್ಲಿಷ್ ಹಾಗು ವಿಜ್ಞಾನ ತಗೆದುಕೊಳ್ತಿದ್ರು. ಜೊತೆಗೆ ಮಕ್ಕಳನ್ನ ಹುರುದುಂಬಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡ್ತಿದ್ರು. ಆಗೊಮ್ಮೆ ಡ್ರಾಯಿಂಗ್ ಸ್ಪರ್ಧೆಗಳ  ಬಗ್ಗೆ ಮೆಮೊ ಬಂದಾಗ, ನನಗೆ ಆ ಸ್ಪರ್ಧೆಯಲ್ಲಿ ಭಾಗವಹಿಸು ಅಂತ ಹೇಳಿದ್ರು. ನಾನು ಭಯ ಪಟ್ಟು ಬರಲ್ಲ ಮಿಸ್ ಅಂದಾಗ, 'ಅಯ್ಯೋ  ನಿಮ್ಮಪ್ಪ ಆರ್ಟಿಸ್ಟ್ ಅಲ್ವೇನೆ. ನಿಂಗ್ ಚಿತ್ರ ಬರ್ಯೋಕ್ ಬರಲ್ವ. ಹೋಗು  ಅಷ್ಟೇ' ಅಂತ ಫೋರ್ಸ್ ಮಾಡಿ ಕಳ್ಸಿದ್ರು. ಅಲ್ಲಿಂದ ನನ್ನ ಜೀವನದ  ಚಿತ್ರ ಯಾನ ಆರಂಭ ಆಯ್ತು. ಅಲ್ಲದೆ, ಮೊದಲಿಂದಲೂ ಅದು ಇದು ಅಂತ ಹಾಡ್ತಿದ್ದ ನನ್ನ ಹಾಗು ನನ್ನ ಅಕ್ಕನನ್ನ ಎಲ್ಲ ಸಂಗೀತ ಕಾರ್ಯಕ್ರಮಗಳಿಗೆ ಕಳುಹಿಸಿ  ಕೊಟ್ರು . ಅದೇ ನನ್ನ ಜೀವನದ ಫೌಂಡೇಶನ್. ಅಲ್ಲಿಂದ ಸಂಗೀತ ಹಾಗು ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಲ್ಲತೊಡಗಿದೆ. ನನ್ನ ಸ್ನೇಹಿತರು  ನನ್ನನ್ನ ಆರ್ಟಿಸ್ಟ್ ಅಂತಲೇ  ಪ್ರೀತಿಯಿಂದ ಕರೀತಿದ್ರು. ಶಾಲೆಗಳಲ್ಲಿ ಹೇಗಾಗಿತ್ತಂದ್ರೆ ಡ್ರಾಯಿಂಗ್ ಗೆ ನಾನಾದ್ರೆ ಹಾದೊದ್ಕೆ ಅಕ್ಕ ಫೇಮಸ್. ಆಮೇಲೆ ನಾನು ಒಬ್ಬ ಚಿತ್ರ ಕಲಾವಿದೆ  ಆಗ್ತೀನಿ  ಅನ್ನೋ ಭರವಸೆಯನ್ನ ನಾನು ಗೆದ್ದುಕೊಂಡು ಕೆಲವು ಸಣ್ಣ ಸಣ್ಣ ಪ್ರೈಸ್ ಗಳು ಕೊಟ್ಟವು. ಅಲ್ಲಿಂದ ಇಲ್ಲಿಯವರ್ಗೂ ಸಂಗೀತ ಹಾಗು ಚಿತ್ರಕಲೆ  ನನ್ನನ್ನ ಒಂದು ರೂಪಕ್ಕೆ ತಂದಿವೆ.

ಚಿತ್ರಕಲೆಯನ್ನೇ ಕಾಲೇಜಿನಲ್ಲೂ ಕಲಿಯೋಕೆ ಮನೆಯಲ್ಲಿ ಪೂರ್ಣ ಬೆಂಬಲ ಇತ್ತು. ಅಕ್ಕನಿಗೂ ಸ್ವಲ್ಪ  ಸ್ವಲ್ಪ  ಆಸಕ್ತಿ ಇದ್ದದ್ದರಿಂದ ನಾನು ಹತ್ತನೇ ತರಗತಿ ಮುಗಿದ ಮೇಲೆ ಹಾಗು ಅಕ್ಕ ಪಿ ಯು ಸಿಯಾ ನಂತರ ಒಟ್ಟಾಗಿ ಕಲಾ ಶಾಲೆಗೆ ಸೇರಿದ್ವಿ. ಹಿಂದಿನಂತೆ  ಇಲ್ಲೂ ಕೂಡ ನಮ್ಮ ಚಿತ್ರಕಲೆ ಹಾಗೂ ಸಂಗೀತದ ಪಯಣ ಒಟ್ಟಾಗೆ ನದಿಯಲಾರಂಭಿಸಿದವು. ಇದೆ ವಿಶೇಷ ಕಾರಣಕ್ಕೆ ಹಲವು ಜನ ನಮ್ಮನ್ನು ಗುರುಟಿಸತೊದಗಿದಾಗ, ನಮ್ಮ ಕಲಾ ಪಯಣಕ್ಕೆ ಒಂದು ಸಂಭ್ರಮದ ಹೊಳಪು ಬಂದಿತು. ನಿರಂತರ ಕಲಾ ಅಭ್ಯಾಸದೊಂಗಿದೆ, ನಮ್ಮ ಜೋಡಿ ಗಾಯನವನ್ನು ಮೆಚ್ಚಿ ಹಲವಾರು ಮಂದಿ ಒಳ್ಳೆಯ ವೇದಿಕೆಯನ್ನೇ ನೀಡಿದರು. ಸುಗಮ ಸಂಗೀತವನ್ನು ಹಾಡುತ್ತಿದ್ದ ನನ್ನನ್ನು ಹೆಚ್ಚು ಸೆಳೆಯುತ್ತಿದ್ದದ್ದು, ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ. ಹಾಗಾಗಿ ಪಂ. ಮಧು ಕಾಮತ್  ಹಾಗೂ ಪಂ. ವಿ. ಎಂ. ನಾಗರಾಜ್ ಅವರ ಬಳಿ ನಾವಿಬ್ಬರು ಸಂಗೀತ ಕಲಿಯಲಾರಂಭಿಸಿದೆವು. ಅಲ್ಲಿಂದ ಶಾಸ್ತ್ರೀಯವಾಗಿ ಸಂಗೀತದ ಕಲಿಕೆ ಆರಂಭಿಸಿದ್ವಿ. ಈಗ ಪಂ.ಕುಮಾರ್ ಕಣವಿ ನಮ್ಮ ಗುರುಗಳು.

ನನ್ನ ಚಿತ್ರಕಲೆ  ಹಾಗೂ ಸಂಗೀತದ ನಡುವಿನ ಬಾಂಧವ್ಯ...

ಮೊದಲಿಂದಲೂ ನನ್ನಲ್ಲಿ  ಸಂಗೀತ ಹಾಗೂ ಚಿತ್ರಕಲೆ ಎರಡಕ್ಕೂ ಸಮಾನ ಪ್ರೀತಿ, ಸಮಾನ ಸ್ತಿತಿ. ಎರಡನ್ನು ನಿರಂತರವಾಗಿ ನಿಭಾಯಿಸಿಕೊಂಡೆ ಬರುತ್ತಿದ್ದೇನೆ. ಕೆಲವೊಮ್ಮೆ ನಮ್ಮ ಶಿಕ್ಷಕರಾಗಲೀ ಸ್ನೇಹಿತರಾಗಲಿ,' ಎರಡರಲ್ಲಿ ಒಂದನ್ನು ಮಾತ್ರ ಆರಿಸ್ಕೋ. ಎರಡೂ ಮಾಡೋದು ಸಾಧ್ಯನೇ ಇಲ್ಲ. ಕೂತು ಯೋಚ್ನೆ ಮಾಡು ಅಂದಾಗೆಲ್ಲಾ  ತೀವ್ರವಾಗಿ ಗೊಂದಲಕ್ಕೊಳಗಾಗುತ್ತಿದ್ದೆ. ರಾತ್ರಿ ಮುಸುಕು ಹೊದ್ದು ಅಳ್ತಿದ್ದೆ. ಸಂಗೀತ ಬಿಟ್ರೆ  ಚಿತ್ರಕಲೆ ಎರಡೇ ನನಗೆ ಗೊತ್ತಿರೋದು. ಅವೆರಡನ್ನು ತೀವ್ರವಾಗಿ ಪ್ರೀತಿಸ್ತಿರೋ ನಾನು ಒಂದು ಕಲೆಯನ್ನು ಕೈಬಿಡೋಂದ್ರೆ  ಏನು ? ಹಾಡ್ ಹಾಡೋದ್ನ ಬಿಡ್ಬೇಕಾ?  ಚಿತ್ಯಾರಾ ಗೀಚೋದ್ನ ನಿಲ್ಸ್ಬೇಕಾ? ಊಹೂಂ. ಯಾವ್ದನ್ನೂ ಕೈ ಬಿಡೋ ಮಾತೆ ಇಲ್ಲ. ಎಷ್ಟು ಜನ ೩-೪ ಕ್ಷೇತ್ರದಲ್ಲಿ ಹೆಸರು ಮಾಡಿಲ್ಲ. ಅಂತದ್ರಲ್ಲಿ, ಬರಿ ಎರಡಕ್ಕೆ ಹೆದರೋದ ಅನ್ತೊಮ್ಮೆ  ನಿರ್ಧರಿಸಿದೆ. ಆಗ್ಲಿಂದ ಯಾರೇ ಕೇಳಲಿ, ನಾನು ಎರಡೂ ಕಲೆಯನ್ನು  ಒಟ್ಟಿಗೆ ಮುಂದುವರೆಸ್ತಿನಿ ಅಂತ ದೈಯ೵ದಿಂದ ಹೇಳತೊಡಗಿದೆ. ನನ್ನ ವಿಶೇಷತೆ ಅಂದ್ರೆ ಅದಲ್ವ. ನಾನ್ಯಾಕೆ ಬೇರೆಯವರಿದ್ದಹಾಗೆ ಇರ್ಬೇಕು? ಹೀಗೆ ನಾನು. ಇನ್ನೊಂದ್ ವಿಷ್ಯಾನ ಹೇಳಿಲ್ಲ ಇರಿ. ನಂಗೆ ಬರ್ಯೊ ಹವ್ಯಾಸಾನೂ ಇದೆ ಗೊತ್ತ. ಆಗಾಗ ಸಣ್ಣ ಪುಟ್ಟ ಪದ್ಯ ಬರೆದು ಪತ್ರಿಕೆಗಳಿಗೆ ಕಳಿಸ್ತಿದ್ದೆ. ಕೆಲವು ಪ್ರಕಟವಾಗಿದ್ದವು ಕೂಡ. ಇನ್ನೂ ಕೆಲ್ವು ವಾಪಾಸ್ ಬತ್ರಿಲಿಲ್ಲಾ ಅಷ್ಟೇ.
ಒಂಭತ್ತನೆಯ ತರಗತಿಯಲ್ಲಿದ್ದಾಗ ಬೇಸಿಗೆ ಶಿಬಿರಕ್ಕೆಂದು ನನ್ನ ತಮ್ಮನೊಂದಿಗೆ ವಿಜಯನಗರದ ಬಿಂಬ ನಾಟಕ ಶಾಲೆ ಸೇರಿದೆ. ಚಿತ್ರಕಲೆ ಇದೆ ಅನ್ನೋ ಕಾರಣಕ್ಕೆ ಅಲ್ಲಿ ಸೇರಿದೆ. ಆದ್ರೆ ಅಲ್ಲಿ ನಾಟಕಕ್ಕೆ ಹೆಚ್ಚು ಒತ್ತು ಅನ್ನೋದು ಆಮೇಲೆ ತಿಳಿಯಿತು. ಅದು ವಾರಕ್ಕೊಮ್ಮೆ ನಡೆಯುವ ರಂಗ ಶಾಲೆ. ಒಟ್ಟು ಆರು ತಿಂಗಳ ಚಟುವಟಿಕೆಯ ಶಿಬಿರಕ್ಕೆ ಸೇರಿದ್ವಿ. ಅಲ್ಲಿ ಮಕ್ಕಳು ತಾವೇ ನಾಟಕವನ್ನು ರಚಿಸಿ ನಿರ್ದೇಶಿಸುವ ಒಂದು ಕಾರ್ಯಕ್ರಮವಿತ್ತು. ಅದರಲ್ಲಿ ನಿರ್ದೇಶಕರಾಗುವ ಅರ್ಹತೆ ಉಳ್ಳವರನ್ನು ಮಕ್ಕಳೇ ಆಯ್ಕೆ ಮಾಡಿದ್ದರು. ಅದರಲ್ಲಿ ನಾನು ಒಬ್ಬಳಾಗಿದ್ದೆ. ನನಗೆ ಸಂಭ್ರಮವೋ ಸಂಭ್ರಮ. ಆಯಿತು, ಎಲ್ಲ ಹಳೆಯ ವಿಧ್ಯಾಥಿ೵ಗಳೊಂದಿಗೆ ಆಯ್ಕೆಯಾದ ನಿರ್ದೇಶಕಿ ನಾನೇ. ಹಾಗಾಗಿ ಅವರೆಲ್ತರ ಮುಂದೆ ನನ್ರ ಕಥೆ ಜೊಳ್ಳಾಗಿರಬಾರದೆಂದು ಕೂತರೂ ನಿಂರತೂ, ಕಡೆಗೆ ಶಾಲೆಯಲ್ಲೂ ಕತೆಯ ಬಗ್ಗೆಯೇ ಯೋಚಿಸತೊಡಗಿದ್ದೆ. ಆಗ ಹೊಳೆದ ಕಥೆ' ಸಹಾಯಕ್ಕೆ ಪ್ರತಿ ಸಹಾಯ' ನಂತರ ಻ದನ್ನು ನಾಟಕದ ರೂಪಕ್ಕಿಳಿಸಿ ನನ್ನ ತಂಡದ ಸದಸ್ಯರಿಗೆ ತೀವ್ರ ಮುತುವಜಿ೵ಹಹಿಸಿ ಹೇಳಿಕೊಟ್ಟೆ. ನಾಟಕದ ದಿನವಂತೂ ತುತ್ತು ಗಂಟಲಿಗಿಳಿದಿರಲಿಲ್ಲ. ನಾಟಕ ಹೇಗೆ ಬರುತ್ತದೋ ಎಂದು ತೆನ್ಷನ್ ಮಾಡಿಕೊಂಡಿದ್ದೆ. ಕೊನೆಗೆ ನಾಟಕ ಸ್ಪಧೆ೵ ಮುಗಿಯಿತು. ಅಲ್ಲಿ ನನಗೆ ಉತ್ತಮ ನಟಿ, ಮೂರನೇ ಉತ್ತಮ ನಾಟಕ ಹಾಗೂ ಚಿತ್ರಕಲೆಯಲ್ಲಿ ಮೊದಲ ಬಹುಮಾನ ಬಂದಿತು. ನನ್ನ ಕುಶಿ ಎಲ್ಲೇ ಮೀರಿತ್ತು. ಅಲ್ಲಿ ನಾಟಕವನ್ನು ಮುಂದುವರೆಸೋಣ ಎಂದುಕೊಂಡಿದ್ದೆ, ಆದ್ರೆ ಮನೆಯಲ್ಲಿ ಸಮ್ಮತಿ ಸಿಗಲಿಲ್ಲ.  ಆದ್ದರಿಂದ ಅದನ್ನು ಬಿಟ್ಟು ಮತ್ತೆ ಚಿತ್ರ-ಸಂಗೀತ ಪ್ರಯಾಣ ಮುಂದುವರೆಸಿಕೊಂಡು ಬಂದೆ.(ಸಿಗದಿದದ್ದು ಒಳ್ಳೆಯದೇ ಆಯಿತು).
ಓದು ಮುಗಿದ ಮೇಲೆ ಮತ್ತಷ್ಟು ಓದುವ ಹಂಬಲವಿತ್ತು. ಎಂದಿಗೂ ಬೇರೆಡೆ ಹೋಗಿ ದುಡಿಯುವುದನ್ನು ನೆನೆಸಿಕೊಂದವಳಲ್ಲ ನಾನು. ಆದರೆ ಅಚಾನಕ್ ಆಗಿ ಎಂಟು ತಿಂಗಳ ಹಿಂದಷ್ಟೇ ಕನ್ನಡದ ಹೆಮ್ಮೆಯ ಪತ್ರಿಕೆ 'ಪ್ರಜಾವಾಣಿಗೆ' ಕಲಾವಿದೆಯಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರಕಿತು. ಬಸ್ಸನ್ನು ಹತ್ತಲು ಹಿಂದೂಮುಂದೂ ನೋಡುತ್ತ , ಚಡಪಡಿಸುತ್ತಿದ್ದ  ನಾನು ಈಗ ಜನಮನವನ್ನು ಅರಿಯಲು ಕಲಿಯುತ್ತಿದ್ದೇನೆ. ಮಾತೆ ಆಡಲು ಹಿಂಜರಿಯುತ್ತಿದ್ದವಳು ಮಾತು ಕಲಿತಿದ್ದೇನೆ. ಎಲ್ಲರೊಂದಿಗೆ ಬೆರೆಯುವುದನ್ನು ಕಲಿತಿದ್ದೇನೆ. ಕಲೆಗಳು ನನ್ನನ್ನು ಕೇವಲ ಕಲಾವಿದೆಯನ್ನಾಗಿ ರೂಪಿಸುತ್ತಿಲ್ಲ. ಬದುಕಿನ ಹಲವು ಮಜಲುಗಳನ್ನು ನನ್ನ ಮುಂದೆ ಅನಾವರಣಗೊಳಿಸುತ್ತಿವೆ. ಅಲ್ಲದೇ ಸ್ನೇಹಿತರಿಂದ ತೀರ ದೂರವೇ ಉಳಿಯುತ್ತಿದ್ದ ನನಗೆ, ಸಂಗೀತದ ಸಾಂಗತ್ಯದಿಂದ ಅಪರೂಪದ ಸ್ನೇಹಿತರೂ ಸಿಕ್ಕಿದ್ದಾರೆ.

ನಾನು ನನ್ನ ಬರವಣಿಗೆ

ಅಪ್ಪ- ಅಮ್ಮ ಇಬ್ಬರು ಸಾಹಿತ್ಯದ ವಲಯದಲ್ಲೇ ಬೆಳೆದವರು. ಹಾಗಾಗಿ ಸಾಹಿತ್ಯದ ಅಭಿರುಚಿ ನಮ್ಮ ಮನೆಯಲ್ಲಿ ಎಲ್ಲರಿಗು ಇರುವ ಹಾಗೆ ನನಗೆ ಕೂಡ ಇದೆ. ಆದ್ದರಿಂದ ಪ್ರೌಢ ಶಾಲಾ ದಿನಗಳಿಂದಲೂ ಏನಾದರೊಂದನ್ನು ಬರೆಯುತ್ತಲೇ ಇರುತ್ತಿದ್ದೆ. ನನ್ನ ಕವನಗಳಿಗಾಗಿ ಒಂದು ಪುಸ್ತಕ ಮಾಡಿದ್ದ ನಾನು, ಬರೆದುದ್ದನ್ನ ಮಾತ್ರ ಯಾರಿಗಾದರು ತೋರಿಸಲು ಬಹಳ ಸಂಕೋಚ ಪಡುತ್ತಿದ್ದೆ. ಮನೆಯಲ್ಲಿ ಯಾರಾದರು ಓದಿ ಮೆಚ್ಚಿಕೊಂದುದನ್ನು ಮಾತ್ರ ಪತ್ರಿಕೆಗಳಿಗೆ ಕಳಿಸುತ್ತಿದ್ದೆ. ಹಾಗಾಗಿ ಎಷ್ಟೋ ಕವನಗಳು ಪುಸ್ತಕದಲ್ಲೇ ಮರೆಯಾದವು.(ಹಾಗಂತ ತುಂಬಾ ಒಳ್ಳೆಯ ಕವನಗಳು ಎಂದು ಭಾವಿಸಬೇಡಿ, ಅವೆಲ್ಲ ನನ್ನ ತೊದಲ್ನುಡಿಗಳು. ಅಷ್ಟೇ ). ಅಲ್ಲದೆ ನೂರಾರು ಕತೆಗಳನ್ನು ಮುಂದುವರೆಸಲಾಗದೆ  ಅವಕ್ಕೆ ಶ್ರದ್ಧಾಂಜಲಿ ನೀಡಿದ್ದೇನೆ.
ಆದರೆ ಹಿಂದೆ ನಾಟಕ ಶಾಲೆಯಲ್ಲಿ ಬರೆದ ನಾಟಕ ಪ್ರದರ್ಶನಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಪ್ಪನ ಗೆಳೆಯರಾದ ಎಲ್ ಏನ್ ಮುಕುಂದರಾಜ್ ಅಂಕಲ್ ಮನೆಗೆ ಬಂದಾಗೊಮ್ಮೆ ನಾನು ಬರೆದ ನಾಟಕವನ್ನು ಪುಸ್ತಕ ಪ್ರಾಧಿಕಾರದಿಂದ ಯುವ ಸಾಹಿತಿಗಳ ಮೊದಲ ಪುಸ್ತಕದ ಮುದ್ರಣಕ್ಕೆ ನೀಡುವ ಅನುದಾನಕ್ಕೆ ಕಳುಹಿಸಿಕೊಡಲು ಹೇಳಿದರು. ನಾನು ಸುಮ್ಮನೆ ಯಾಕೆ ಅಲ್ಲೆಲ್ಲ ಕಳುಹಿಸಿ ಓದಿದವರಿಂದ ಕರೆದು ಬೈಸಿಕೊಳ್ಳುವುದು ಎಂದು ಸುಮ್ಮನಾಗಿದ್ದೆ. ಆದರೆ ಅವರ ಒತ್ತಾಯಕ್ಕೆ ಮಣಿದು ಪುನಃ ಅದನ್ನು ಬರೆದು ಕಳುಹಿಸಿದೆ. ಅದೃಷ್ಟಕ್ಕೆ ಅದು ಅನುದಾನಕ್ಕೆ ಆಯ್ಕೆಯಾಯಿತಲ್ಲದೆ, ನಮ್ಮದೇ ಪ್ರಕಾಶನದಲ್ಲಿ ಅದನ್ನು ಪ್ರಕಟ ಮಾಡಲಾಯಿತು. ಜೊತೆಗೆ ಅಪ್ಪ ಅಮ್ಮನ ಒತ್ತಾಯಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡುವ 'ಅರಳು ಸಾಹಿತ್ಯ' ಪ್ರಶಸ್ತಿ ಆಯ್ಕೆ ಸಮಿತಿಗೂ ಕಳುಹಿಸಿಕೊಟ್ಟೆ. ಅಲ್ಲಿ ನನಗೆ ನಿಜಕ್ಕೂ ಶಾಕ್ ಆಯಿತು. ಏಕೆಂದರೆ, ನನ್ನ ಬರವಣಿಗೆಗೆ ಅರಳು ಸಾಹಿತ್ಯ ಪ್ರಶಸ್ತಿ ದೊರಕಿತ್ತು. ಒಂದೆಡೆ ಭಯ ಇನ್ನೊಂದೆಡೆ  ಸಂಭ್ರಮ. ಆದರೆ ಇದನ್ನು ಪಡೆದ ಮೇಲೆ ಬರವಣಿಗೆಯನ್ನು ಮುಂದುವರೆಸಲೇಬೇಕು. ಆದರೆ ಅದು ನನ್ನಿಂದ ಸಾಧ್ಯವೇ ಎಂಬ ಚಿಂತೆ ಬೇರೆ ಕಾಡತೊಡಗಿತು. ಮುಂದೆ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂದಿದ್ದರಿಂದ ಬರವಣಿಗೆ ಸ್ವಲ್ಪ ಕಷ್ಟವೇ ಆಯಿತು. ಆದರೆ ಬರೆಯುವ ಹಂಬಲ ಮನಸ್ಸಿನಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಹಾಗಾಗಿಯೋ ಏನೋ, ನಾನು ಪತ್ರಿಕೆಯನ್ನು ಸೇರಿದ ಮೇಲೆ, ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಯಮನ್' ರಾಗವನ್ನು ಹಾಡಿದ್ದೆ. ಅದನ್ನು ಬಹಳ ಜನ ಮೆಚ್ಚಿ ಅಭಿನಂದಿಸಿದ್ದರು. ಜೊತೆಗೆ ಮೆಟ್ರೋನ ಪ್ರಧಾನ ಸಂಪಾದಕರಾಗಿರುವ ವಿಶಾಕ ಸರ್, 'ಸಂಗೀತದ ಬಗ್ಗೆ ಮೆಟ್ರೋಗೆ ಬರೀತಿರ' ಎಂದು ಕೇಳಿದರು. ಆಗ ನನಗಾದ ಖುಷಿ  ಅಷ್ಟಿಷ್ಟಲ್ಲ. ತಕ್ಷಣವೇ ಒಪ್ಪಿಕೊಂಡೆ. ಅಲ್ಲಿಂದ ನನ್ನ ಬರವಣಿಗೆಗೂ ಅವಕಾಶ ಸಿಕ್ಕದ್ದು ಹೇಳತೀರದ ಅನುಭವ. ಬೇರೆಲ್ಲ ವಿಷಯಗಳಿಗಿಂತ ಸಂಗೀತದ ಬಗ್ಗೆಯೇ ಹೆಚ್ಚು ಓದಲು ಇಷ್ಟ ಪಡುವ ನಾನು, ಸಂಗೀತದ ಬಗ್ಗೆ ಹೆಚ್ಚೆಚ್ಚು ಬರೆಯುವ ಹಂಬಲವಿದೆ. ಪತ್ರಿಕೆಗೆ ಸೇರಿದ್ದರಿಂದ ಪ್ರಭಾ ಆತ್ರೆಯವರಂಥಹ ಮಹಾನ್ ಕಲಾವಿದೆಯೊಂದಿಗೆ ಕೂತು ಅವರನ್ನು ಸಂದಶಿ೵ಸುತ್ತ, ಸಂಗೀತದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಯುವ ಅವಕಾಶವೂ ನನ್ನದಾದದ್ದು ಮರೆಯಲಾಗದ ಸಂಗತಿ.


ನಾನು ಮತ್ತು ಮಳೆ...

ನನಗು ಮಳೆಗೂ ಅವಿನಾಭಾವ ಸಂಭಂದವಿದೆ. ಮಳೆಗಾಲದಲ್ಲಿ ಹುಟ್ಟಿದ್ದಕ್ಕೋ ಏನೋ ಗೊತ್ತಿಲ್ಲ. ಮಳೆಯೆಂದರೆ ಸಾಕು ಮುಖದಲ್ಲಿ ನಗು ಮೂಡುತ್ತದೆ. ಮನ ಅರಳುತ್ತದೆ. ಸುಮ್ಮನೆ ಕೂಡುವುದು ಅಸಾಧ್ಯ. ಬಿಡುವಿಲ್ಲದಂತೆ ಹಾಡುಗಳು ಒಂದರಹಿಂದೊಂದಂತೆ ಮನದಿಂದ ಹರಿಯುತ್ತವೆ.  ಅದರಲ್ಲೂ ತೀವ್ರವಾಗಿ ಪ್ರೀತಿಸುವ ಹಾಡುಗಳು ಬಂದಿಶ್ ಗಳು ನನ್ನ ಅಪ್ಪಣೆಗೆ ಕಾಯದೆ ಹೊರ ಹೊಮ್ಮುತ್ತವೆ. ಮನೆಯಲ್ಲಿದ್ದರೆ ಕಿಟಕಿಯಾಚೆ ಎರಡೂ ಕೈಗಳನ್ನೊಡ್ಡಿ  ಆಡುತ್ತೇನೆ. ಅಮ್ಮ ಬೈಯುತ್ತಲೇ ಬಿಸಿ ಬಿಸಿ ಚಾ ತಂದು ಕೊಡುತ್ತಾ, ' ಮಳ್ಯಾಗ್ ಆಡ್ಬೇಡ. ಗಂಟ್ಲ ಕೆಡ್ತೆತಿ' ಎಂದು ನನ್ನ ದನಿಯ ಕಾಳಜಿ ಮಾಡುತ್ತಾರೆ. ಹೀಗೆ ಕಾಳಜಿ ಮಾಡೋ ಅಪ್ಪಾ ಅಮ್ಮಾ ಇಬ್ರೂ ತುಂಬಾ ಸ್ಪೆಷಲ್ ಗೊತ್ತಾ. ನಾನು ನನ್ನಕ್ಕ, ನನ್ನ ತಮ್ಮ  ಏನು ಕಲೀತಿನಿ ಅಂದ್ರೂ ಊಹೂ ಅಂದವರಲ್ಲ. ತಮ್ಮ ತನು ಮನ ಧನವನ್ನ ಖಚು೵ ಮಾಡಿ ನಮ್ಗೆ ವಿದ್ಯೆ ಕೊಟ್ಟಿದ್ದಾರೆ. ತಮಗಾಗಿ ಯಾವ್ದೇ ಆಸ್ತಿ ಪಾಸ್ತಿ ಮಾಡ್ಕೊಳ್ದೇ ನಮ್ನೇ ಆಸ್ತಿಯನ್ನಾಗಿ ರೂಪಿಸಿದ್ದಾರೆ. ಅವರ ಬಗ್ಗೆ ಹೇಳದೇ ನನ್ನ ಮಾತು ಮುಗಿಯುವುದಿಲ್ಲ  ಅಂತನಿಸ್ತು. ಹೇಳಿದೆ...